ಪ್ರಾಥಮಿಕ ಪೂರ್ವದ ಶಿಕ್ಷಣ

	ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕನಿಷ್ಠ ವಯೋಮಿತಿಗೆ ಮುನ್ನ ಮಕ್ಕಳಿಗೆ ರಾಷ್ಟ್ರದ ಶಿಕ್ಷಣ ಪದ್ದತಿಯ ಚೌಕಟ್ಟಿನಲ್ಲಿ ಅಥವಾ ಹೊರಗೆ ಏರ್ಪಟ್ಟಿರುವ ಶಿಕ್ಷಣವ್ಯವಸ್ಥೆ. ಸಾಮಾನ್ಯವಾಗಿ ಇದು ಮೂರನೆಯ ವರ್ಷದಿಂದ ಐದನೆಯ ವರ್ಷದ ಪೂರ್ತಿ ಹಾಗೂ ಕೆಲವು ಸಂದರ್ಭ ಆರನೆಯ ವರ್ಷಪೂರ್ತಿ ಮಕ್ಕಳಿಗೆ ಶಿಕ್ಷಣವೀಯುವಂತೆ ಏರ್ಪಟ್ಟಿರುತ್ತದೆ. ಹಿಂದೆ ಈ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಅಗತ್ಯವೆಂದು ಭಾವಿಸಿರಲಿಲ್ಲ. ಈ ಶತಮಾನದ ಆದಿಯಲ್ಲಿ ಮಕ್ಕಳಿಗೆ ಆ ಎಳೆಯ ದಿನಗಳಲ್ಲಿ ನೀಡುವ ಶಿಕ್ಷಣ ಅವರ ಮುಂದಿನ ಜೀವನದ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಬಲ್ಲದೆಂಬ ಅಂಶ ಪ್ರಚಾರವಾದಂತೆ ಶಿಕ್ಷಣವೇತ್ತರ ಹಾಗೂ ಸಮಾಜಕಲ್ಯಾಣ ಕಾರ್ಯಕರ್ತರ ಗಮನ ಆ ಬಗ್ಗೆ ಹರಿಯತೊಡಗಿತು. ಅದಕ್ಕೂ ಹಿಂದೆ ಜರ್ಮನಿಯಲ್ಲಿ ಫ್ರೊಬೆಲ್ ಎಂಬ ಶಿಕ್ಷಣತಜ್ಞ ಮಕ್ಕಳನ್ನು ಮಮತೆಯಿಂದ ಕಂಡು ಅವರಿಗೆ ಅಗತ್ಯವಾದ ಆಟಗಳಲ್ಲಿ ತೊಡಗಿಸಬೇಕೆಂದು ಪ್ರಚಾರ ಮಾಡಿ, ಕಿಂಡರ್ ಗಾರ್ಟನ್ (ಮಕ್ಕಳತೋಟ) ಎಂಬ ತನ್ನದೇ ಆದ ಒಂದು ಶಿಕ್ಷಣ ಪದ್ಧತಿಯನ್ನು ಆರಂಭಿಸಿದ್ದ. ನಗರಗಳು ಬೆಳೆದು ಉದ್ಯೋಗಗಳು ಹೆಚ್ಚಿದಂತೆ ಕೆಲಸಗಾರರು ಕೊಳಚೆಪ್ರದೇಶಗಳಲ್ಲಿ ವಾಸಿಸಬೇಕಾದ ಅನಿವಾರ್ಯ ಹೆಚ್ಚಿದಂತೆ ಅವರ ಮಕ್ಕಳ ಅದರಲ್ಲೂ ತಾಯಂದಿರೂ ಕೆಲಸಕ್ಕೆ ಹೋಗಬೇಕಾದ ಕುಟುಂಬಗಳ ಮಕ್ಕಳ ಯೋಗಕ್ಷೇಮಕ್ಕಾಗಿ ಶಿಶುಗೃಹಗಳನ್ನು ಏರ್ಪಡಿಸಬೇಕಾದ ಅಗತ್ಯ ಒದಗಿ ಬಂತು. ಅಲ್ಲಿ ಅವುಗಳ ಆರೋಗ್ಯ, ನೈರ್ಮಲ್ಯ, ಪೋಷಣೆ ಹಾಗೂ ಜೀವನ ವಿಧಾನ-ಇವುಗಳ ಕಡೆ ಗಮನ ಕೊಡುವುದು ಅನಿವಾರ್ಯವಾಯಿತು. ಕ್ರಮ ಕ್ರಮವಾಗಿ ಆ ಮಕ್ಕಳಿಗೂ ಒಂದು ರೀತಿಯ ಶಿಕ್ಷಣದ ಅಗತ್ಯ ವ್ಯಕ್ತವಾಗುತ್ತ ಬಂತು. ಇಷ್ಟು ದೀರ್ಘಕಾಲದಿಂದ ಮಕ್ಕಳ ಈ ವಯಸ್ಸಿನ ಶಿಕ್ಷಣ ಪ್ರಚಾರದಲ್ಲಿದ್ದರೂ ಯಾವ ದೇಶದಲ್ಲೂ ಅದು ಸರ್ಕಾರದ ಹೊಣೆಗಾರಿಕೆಗೆ ಇನ್ನೂ ಒಳಪಟ್ಟಿಲ್ಲ; ಅದರ ಅಗತ್ಯವನ್ನು ಒಪ್ಪಿ ಅಷ್ಟಿಷ್ಟು ಸಹಾಯ ಸಲಕರಣೆಗಳನ್ನು ಒದಗಿಸುತ್ತಿದ್ದರೂ ಸಾರ್ವತ್ರಿಕವಾಗಿ ಅದಕ್ಕಾಗಿ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ ಸದ್ಯದಲ್ಲಿ ಎಲ್ಲ ದೇಶಗಳಲ್ಲೂ ಮಕ್ಕಳ ಈ ವಯೋಮಾನದ ಶಾಲೆಗಳು ಏರ್ಪಟ್ಟಿದ್ದರೂ ಅವನ್ನು ಸರ್ಕಾರ ನಡೆಸುತ್ತಿಲ್ಲ, ಪೌರಸಭೆಗಳೂ, ಉದ್ಯೋಗಕ್ಷೇತ್ರದ ಕಾರ್ಖಾನೆಗಳೂ, ಸಮಾಜ ಕಲ್ಯಾಣ ಶಾಖೆಯೂ, ಧಾರ್ಮಿಕ ಸಂಸ್ಥೆಗಳೂ, ಖಾಸಗಿ ಸಂಸ್ಥೆಗಳೂ ಅವನ್ನು ನಡೆಸುತ್ತಿವೆ. 

	ಪ್ರಾಥಮಿಕ ಪೂರ್ವದ ಶಿಕ್ಷಣ ಶಿಶುವಿಹಾರ, ಕಿಂಡರ್‍ಗಾರ್ಟನ್, ಬಾಲವಾಡಿ, ಶಿಶುಗೃಹ ಮುಂತಾದ ಹಲವು ಹೆಸರುಗಳಿಂದ ಪ್ರಚಾರಕ್ಕೆ ಬಂದಿದ್ದರೂ ಅದನ್ನು ನಾಲ್ಕು ಮುಖ್ಯ ಬಗೆಯವನ್ನಾಗಿ ವಿಂಗಡಿಸಬಹುದು.

	1) ಕಳೆದ ಶತಮಾನದಲ್ಲಿ ಜರ್ಮನಿಯಲ್ಲಿ (1782-1852) ಫ್ರೆಡ್ರಿಕ್ ಫ್ರೊಬೆಲ್ ಆರಂಭಿಸಿದ ಕಿಂಡರ್‍ಗಾರ್ಟನ್ ಪದ್ಧತಿ ಮೊದಲನೆಯದು. ಇದು ಮಕ್ಕಳಿಗೆ ಆಟದ ಅಗತ್ಯವನ್ನು ಎತ್ತಿಹಿಡಿದು ಅದಕ್ಕಾಗಿ ಬಗೆಬಗೆಯ ಆಟಿಕೆಗಳನ್ನೂ ಹಾಗೂ ಆಧ್ಯಾತ್ಮಿಕ ರಹಸ್ಯಾರ್ಥವುಳ್ಳ ಗುಂಡು, ತುಂಡು, ಚದರಬಿಲ್ಲೆ, ವರ್ಣದದಾರ ಮುಂತಾದವುಗಳನ್ನು ಬಳಸುತ್ತಿತ್ತು. 2) ಅನಂತರ ಈ ಶತಮಾನದ ಆದಿಯಲ್ಲಿ ಇಟಲಿಯ ಮೇಡಂ ಮಾಂಟೆಸೊರಿಯೆಂಬ ಮನೋರೋಗ ಚಿಕಿತ್ಸಾತಜ್ಞೆ ಬಡಮಕ್ಕಳಿಗಾಗಿ ಶಿಶುಗೃಹಗಳನ್ನು ಆರಂಭಿಸಿದಳು. ಅಲ್ಲಿ ಅವರ ಶಿಕ್ಷಣಕ್ಕೂ ಚಟುವಟಿಕೆಗಳಿಗೂ ವೈಯಕ್ತಿಕ ಗಮನಕ್ಕೂ ಪ್ರಾಶಸ್ತ್ಯವಿತ್ತು ವ್ಯವಸ್ಥೆಮಾಡಲಾಯಿತು. 3) ಆಮೇಲೆ ಇಂಗ್ಲೆಂಡಿನ ಮಾರ್ಗರೆಟ್ ಮ್ಯಾಕ್ಮಿಲನ್ ಎಂಬಾಕೆ ನರ್ಸರಿಶಾಲೆಗಳೆಂಬ ಹೆಸರಿನಿಂದ ಮತ್ತೊಂದು ರೀತಿಯ ಶಿಶು ಶಾಲೆಗಳನ್ನು ಪ್ರಚಾರಕ್ಕೆ ತಂದಳು. ಅದರಲ್ಲಿ ಮಕ್ಕಳ ಆರೋಗ್ಯ ಜೀವನಕ್ಕೂ ಭಾಷಾಬೆಳವಣಿಗೆಗೂ ವರ್ಣಮಯವೂ ಸುಖಪ್ರದವೂ ಆದ ಜೀವನ ವಿಧಾನಕ್ಕೂ ಪ್ರಾಶಸ್ತ್ಯವೀಯಲಾಗಿತ್ತು. 4) ಇವಲ್ಲದೆ ಹತ್ತೊಂಬತ್ತನೆಯ ಶತಮಾನದಲ್ಲಿ ಡೆಕ್ರೋಲಿ ಎಂಬ ಬೆಲ್ಜಿಯಮ್ಮಿನ ಶಿಕ್ಷಣತಜ್ಞ ಮತ್ತೊಂದು ಪದ್ಧತಿಯನ್ನು ಆರಂಭಿಸಿದ. ಅದು ಫ್ರೊಬೆಲ್ಲನ ವಿಧಾನವನ್ನು ಆಧರಿಸಿದ್ದರೂ ಅದರಲ್ಲಿ ಬಳಸುವ ರಹಸ್ಯಾರ್ಥದ ಉಪಕರಣಗಳನ್ನು ಬಳಸುತ್ತಿರಲಿಲ್ಲ. ಇದರಲ್ಲಿ ಮಕ್ಕಳ ಸ್ವಾತಂತ್ರ್ಯಕ್ಕೂ ಚಟುವಟಿಕೆಗೂ ಹೆಚ್ಚು ಪ್ರಾಶಸ್ತ್ಯವಿತ್ತಿದೆ. ಪೋರ್ಚುಗಲ್ಲಿನ ಹತ್ತೊಂಬತ್ತನೆಯ ಶತಮಾನದ ಕವಿಯಾದ ಜೋಆವೊ ಡಿ ಡಯಸ್ ಎಂಬಾತನೂ ಒಂದು ರೀತಿಯ ಶಿಶುಶಿಕ್ಷಣ ಪದ್ಧತಿಯನ್ನು ಆರಂಭಿಸಿದ್ದ. 

	ಮೇಲಿನ ವಿವಿಧ ಶಿಶುಶಿಕ್ಷಣ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಆರಂಭವಾದರೂ ಈ ಶತಮಾನದ ಮೊದಲ ನಲವತ್ತು ವರ್ಷಗಳಲ್ಲಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರಚಾರಕ್ಕೆ ಬಂದವು. ಈಗ ಕಿಂಡರ್‍ಗಾರ್ಟನ್ ಪದ್ಧತಿ ಜರ್ಮನಿ, ಯೂರೋಪಿನ ಕೆಲವು ದೇಶಗಳು ಮತ್ತು ಅಮೆರಿಕ, ಚೀನ, ಜರ್ಮನಿ ಮುಂತಾದೆಡೆಗಳಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಮಾಂಟೆಸೊರಿ ಪದ್ಧತಿ ಇಟಲಿಯಲ್ಲಿ ಆರಂಭವಾಗಿ ಅಮೆರಿಕದಲ್ಲಿ ಸ್ವಲ್ಪಕಾಲ ಪ್ರಚಾರದಲ್ಲಿತ್ತು. ನರ್ಸರಿ ಪದ್ಧತಿ ಪ್ರಪಂಚದಾದ್ಯಂತ ಪ್ರಚಾರದಲ್ಲಿದೆ. ಇದಕ್ಕೆ ಬ್ರಿಟಿಷ್ ಸರ್ಕಾರ ಪ್ರಪಂಚದ ಬಹುಭಾಗಗಳಲ್ಲಿ ತನ್ನ ವಸಾಹತುಗಳನ್ನು ಪಡೆದಿದ್ದುದೆ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಡೆಕ್ರೊಲಿ ಪದ್ಧತಿ ಬೆಲ್ಜಿಯಮ್ಮಿನಲ್ಲೂ ಜೋಆವೊಡಿಡಯಸನ ಪದ್ಧತಿ ಪೋರ್ಚಗಲ್ಲಿನಲ್ಲೂ ಪ್ರಚಾರದಲ್ಲಿವೆ. ಮೊದಮೊದಲು ಮೂಲಪದ್ಧತಿಯ ಲಕ್ಷಣಗಳನ್ನು ಆಯಾ ಶಾಲೆ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರೂ ಈಗ ಪ್ರತಿಯೊಂದು ಪದ್ಧತಿ ತನ್ನ ಲೋಪ ದೋಷಗಳನ್ನು ತೊರೆದು ಅನ್ಯ ಪದ್ಧತಿಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುತ್ತಿದೆ ಭಾರತದಲ್ಲಿ ಈ ಪ್ರವೃತ್ತಿ ಎದ್ದು ಕಾಣುತ್ತಿದೆ.

	ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಒಂದನೆಯ ವರ್ಷದ ತರಗತಿಯನ್ನೂ (ಲೋಅರ್ ಕಿಂಡರ್‍ಗಾರ್ಟನ್) ನಾಲ್ಕರಿಂದ ಐದು ವರ್ಷದ ಮಕ್ಕಳಿಗೆ. ಎರಡನೆಯ ವರ್ಷದ ತರಗತಿಯನ್ನೂ (ಅಪ್ಪರ್ ಕಿಂಡರ್ ಗಾರ್ಟನ್) ನಡೆಸುವ ಪೃವೃತ್ತಿ ಬೆಳೆಯುತ್ತಿದೆ. ಅಲ್ಲದೆ ಆಟಪಾಠ ಚಟುವಟಿಕೆಗಳ ಜೊತೆಗೆ ಅಕ್ಷರಾಭ್ಯಾಸಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಆ ವರ್ಷದ ಕೊನೆಯಲ್ಲಿ ಮಕ್ಕಳನ್ನು ಪ್ರಾಥಮಿಕ ಮೊದಲ ತರಗತಿಗೆ ವರ್ಗಾಯಿಸುವರು.

(ನೋಡಿ- ಕಿಂಡರ್‍ಗಾರ್ಟನ್)
(ನೋಡಿ- ನರ್ಸರಿ-ಶಾಲೆ)						   (ಎಂ.ಯು.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ